ಕಾಯಾಂತರೀಕರಣ

 ಹಲವು ಸಂದರ್ಭಗಳಲ್ಲಿ ಹಿಂದೆ ಇದ್ದ ಇಡೀಶಿಲೆಯನ್ನು ಅಥವಾ ಅದರಲ್ಲಿನ ಹಲಕೆಲವು ಖನಿಜಗಳನ್ನು ಹೊಸ ಖನಿಜಗಳಾಗಿ ಮಾರ್ಪಡಿಸುವ ಕಾರ್ಯ (ಮೆಟಸೊಮ್ಯಾಟಿಸಂ). ಭೂವಿಜ್ಞಾನದಲ್ಲಿ ಮೆಟಸೊವ್ಯೂಟಿಸಂ ಎಂಬ ಪದವನ್ನು ಮೊದಲು ಬಳಕೆಗೆ ತಂದವ ನೌಮನ್. ಖನಿಜ ನೀಕ್ಷೇಪಗಳ ಉತ್ಪತ್ತಿಯಲ್ಲಿ ಈ ಕ್ರಿಯೆಯ ಮಹತ್ತ್ವವನ್ನು ಮೊಟ್ಟಮೊದಲು ಕಂಡುಕೊಂಡವ ಜಿóಮ್ಮರ್‍ಮನ್ (1749). ಆದರೂ ಇದರ ಪ್ರಾಮುಖ್ಯದ ಅರಿವಾದದ್ದು ಇಪ್ಪತ್ತನೆಯ ಶತಮಾನದ ಆರಂಭದಲ್ಲಿ. ಈ ಕ್ರಿಯೆಯ ವೈಶಿಷ್ಟವೆಂದರೆ ಇದು ನಡೆಯುವುದರಿಂದ ಶಿಲೆಗೆ ಆ ಮೊದಲು ಇದ್ದ ಹೊರ ಆಕಾರದಲ್ಲಿ ಎಳ್ಳಷ್ಟೂ ಬದಲಾವಣೆಯಾಗುವುದಿಲ್ಲ. ಆದರೆ ರಸಾಯನಿಕ ಸಂಯೋಜನೆಯಲ್ಲಿ ಮಾತ್ರ ನಿರ್ದಿಷ್ಟ ಬದಲಾವಣೆ ಕಂಡು ಬರುತ್ತದೆ. ಈ ಕ್ರಿಯೆಯಲ್ಲಿ ಖನಿಜಪೂರಿತ ದ್ರವಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಇವುಗಳಿಗೆ ಮೆಟಸೋಮುಗಳೆಂದು ಹೆಸರು. ಇವು ಹಿಂದಿನ ಖನಿಜಗಳ ಅಣುಗಳನ್ನು ಕ್ರಮೇಣ ಹೊರದೂಡಿ ಅವುಗಳ ಸ್ಥಾನಗಳನ್ನು ಆಕ್ರಮಿಸಿ ಹೊಸ ಖನಿಜವನ್ನು ರೂಪಿಸುತ್ತವೆ. ಅಧಿಕ ಉಷ್ಣತೆಯಲ್ಲಿರುವ ದ್ರವಗಳು ಮತ್ತು ಅನಿಲಗಳು ಈ ಕ್ರಿಯೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ. ದ್ರವಸ್ಥಿತಿಯಲ್ಲಿ ಕಾಯಂತರೀಕರಣ ನಡೆಯುವುದರಿಂದ ಖನಿಜ ಬದಲಾವಣೆ ಬಹಳ ಸಮರ್ಪಕವಾದ ರೀತಿಯಲ್ಲಿ ಉಂಟಾಗುತ್ತದೆ. ಈ ಚಟುವಟಿಕೆ ಹೆಚ್ಚಿನ ಆಳದಲ್ಲಿ ಅಥವಾ ಹೆಚ್ಚು ಒತ್ತಡವಿರುವ ಆವರಣದಲ್ಲಿ ನಡೆದಾಗಲೂ ಕ್ರಿಯೆಗಳಿಗೊಳಗಾದ ಶಿಲೆ ಗಡಸುಸಾಗಿದ್ದಾಗಲೂ ವಸ್ತುವಿನ ಮೊತ್ತದಲ್ಲಿ ಯಾವ ಬಗೆಯ ವ್ಯತ್ಯಾಸವೂ ಉಂಟಾಗುವುದಿಲ್ಲ. ಬಹುಶಃ ಇಲ್ಲಿ ಪರಮಾಣುಗಳ ಸ್ಥಾನಪಲ್ಲಟ ನಡೆಯಲಾರದೆಂದು ಭಾವಿಸಲಾಗಿದೆ. ಆದರೂ ಈ ಕ್ರಿಯೆ ನಡೆಯುವ ರೀತಿ ಅಷ್ಟು ನಿಖರವಾಗಿ ತಿಳಿದುಬಂದಿಲ್ಲ. ಹೀಗಿದ್ದರೂ ಇದಕ್ಕೆ ಸಂಬಂಧಿಸಿದ ಕೆಲವು ವಿವರಗಳನ್ನು ಗುರುತಿಸಲಾಗಿದೆ. ಹೊಸದಾಗಿ ರೂಪುಗೊಳ್ಳುತ್ತಿರುವ ಮತ್ತು ಕಾಯಾಂತರೀಕರಣಕ್ಕೊಳಗಾದ ಖನಿಜಗಳು ಪರಸ್ಪರ ತಾಗಿಕೊಂಡಿರುತ್ತದೆ. ಎರಡರ ನಡುವೆ ಬಹು ಸೂಕ್ಷ್ಮವಾದ ದ್ರಾವಣದ ಪೊರೆಯೊಂದಿದ್ದು ಕಣಗಳ ಅಥವಾ ಪರಮಾಣುಗಳ ಚಲನೆಗೆ ಉತ್ತಮ ಅವಕಾಶವಿರುತ್ತದೆ. ಖನಿಜಗಳ ಹೊರ ಅಂಚಿನಲ್ಲಿ, ಸೀಳುಗಳಲ್ಲಿ ಮತ್ತು ಬಿರುಕುಗಳಲ್ಲಿ ಕ್ರಿಯೆ ಪ್ರಾರಂಭವಾಗಿ ಕ್ರಮೇಣ ಹರಡುತ್ತ ಖನಿಜದ ಎಲ್ಲ ಅಣುಗಳನ್ನೂ ಹೊರದೂಡಿ ಅವುಗಳ ಸ್ಥಾನದಲ್ಲಿ ಮತ್ತೊಂದು ಹೊಸ ಖನಿಜವನ್ನೇ ರೂಪುಗೊಳಿಸುತ್ತದೆ. ಶಿಲೆಗಳು ಈ ಕ್ರಿಯೆಯ ಪ್ರಭಾವಕ್ಕೊಳಗಾದಾಗ ಮೊಟ್ಟಮೊದಲು ಮ್ಯಾಫಿಕ್ (ಮೆಗ್ನೀಷಿಯಂ ಕಬ್ಬಿಣದ) ಖನಿಜಗಳು ಅನಂತರ ಕ್ರಮವಾಗಿ ಫೆಲ್ಡ್ಸ್‍ಪಾರ್ ಮತ್ತು ಕ್ವಾಟ್ರ್ಜ್‍ಗಳು ಕಾಯಾಂತರೀಕರಣಕ್ಕೆ ತುತ್ತಾಗುತ್ತವೆ. ಸಲ್ಫೈಡುಗಳು ಸಾಮಾನ್ಯವಾಗಿ ಎಲ್ಲ ಖನಿಜಗಳನ್ನೂ ಕಾಯಾಂತರೀಕರಿಸುತ್ತವೆ. ಅಲ್ಲದೆ ಕ್ರಿಯೆಯ ಮೊದಲ ಹಂತದಲ್ಲಿ ರೂಪುಗೊಂಡ ಖನಿಜಗಳು ಮತ್ತೆ ಮತ್ತೆ ಕಾಯಾಂತರೀಕರಣದ ಪ್ರಭಾವಕ್ಕೆ ಒಳಗಾಗಬಹುದು. ಹೀಗೆ ಸುಮಾರು ಎಂಟು ಹಂತಗಳವರೆಗೆ ಕಾಯಾಂತರೀಕರಣ ನಡೆಯಬಹುದೆಂದು ಭಾವಿಸಲಾಗಿದೆ ಶಿಲೆಗಳ ಸ್ತರೀಕರಣ, ರಚನಾವೈವಿಧ್ಯಗಳು ಮತ್ತು ಅದರ ಭೌತ ಮತ್ತು ರಾಸಾಯನಿಕ ಲಕ್ಷಣಗಳು ಕ್ರಿಯೆಯ ಪರಿಮಿತಿಯನ್ನು ನಿರ್ಧರಿಸುವ ಅಂಶಗಳು.

 ಕಾಯಾಂತರೀಕರಣದ ಪ್ರೇರಕಗಳು: ಕಾಯಾಂತರೀಕರಣದಲ್ಲಿ ದ್ರವ ಮತ್ತು ಅನಿಲಗಳ ಪಾತ್ರ ಬಹು ಮುಖ್ಯ. ಅದರಲ್ಲೂ ನೀರು ಬಹು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅನೇಕ ಅಂತರ್ಜನಿತ (ಹೈಪೋಜೀನ್) ಖನಿಜನಿಕ್ಷೇಪಗಳು ಹೆಚ್ಚು ಉಷ್ಣತೆಯ ಕ್ಷಾರೀಯ ದ್ರಾವಣಗಳ ಕಾರ್ಯಾಚರಣೆಯಿಂದ ಉಂಟಾಗಿವೆ. ಬಹುಶಃ ಇವು ಆಳದಲ್ಲಿ ಹುದುಗಿರುವ ಮಾತೃ ಶಿಲಾದ್ರವದಿಂದ ಹೊರಹೊಮ್ಮಿ ಸುತ್ತಮುತ್ತಲ ಶಿಲೆಗಳ ಮೂಲಕ ಪ್ರವಹಿಸುವಾಗ ಅವುಗಳ ಸಂಪರ್ಕದಿಂದಲೂ ಕ್ಷಾರತ್ವವನ್ನು ಪಡೆಯುತ್ತವೆಂದು ಭಾವಿಸಲಾಗಿದೆ. ಸಾಮಾನ್ಯ ನೀರು ಮತ್ತು ಆರ್ಟೀಸಿಯನ್ ಬಾವಿಗಳ ನೀರು ಸಹ ಕೆಲವು ಸಂದರ್ಭಗಳಲ್ಲಿ ಮೂಲ ಮತ್ತು ಬಹಿರ್ಜನಿತ ಖನಿಜ ನಿಕ್ಷೇಪಗಳಿಗೆ ಕಾರಣವಾಗಿವೆ. ಉದಾಹರಣೆಗೆ ಮ್ಯಾಂಗನೀಸ್ ಮತ್ತು ಸಲ್ಫೈಡ್ ನಿಕ್ಷೇಪಗಳು.

 ಕಾಯಂತರೀಕರಣದ ಉಷ್ಣತೆ ಮತ್ತು ಒತ್ತಡ : ಬಹಿರ್ಜನಿತ ಕಾಯಾಂತರೀಕರಣ ಸಾಮಾನ್ಯ ಉಷ್ಣತೆ ಮತ್ತು ಒತ್ತಡಗಳ ಪ್ರಭಾವದಲ್ಲೂ ಸಂಸ್ಪರ್ಶ ಕಾಯಾಂತರೀಕರಣ ಹೆಚ್ಚಿನ ಉಷ್ಣತೆ ಮತ್ತು ಒತ್ತಡಗಳ ಪ್ರಭಾವದಲ್ಲೂ ಉಂಟಾಗುತ್ತವೆ. ಹೆಚ್ಚಿನ ಉಷ್ಣತೆಯಿರುವ ಕಡೆಯಂತೂ ಈ ಕ್ರಿಯೆ ಅತ್ಯಂತ ಪರಿಣಾಮಕಾರಿ. ಏಕೆಂದರೆ ರಾಸಾಯನಿಕ ಕ್ರಿಯೆಯನ್ನು ಉಷ್ಣತೆ ಪಟುಗೊಳಿಸುತ್ತದೆ. ಹಲವು ವೇಳೆ ಕಾಯಾಂತರೀಕರಣ ಮತ್ತು ಉಷ್ಣತೆ ಒತ್ತಡಕ್ಕನುಸಾರವಾಗಿ ಬದಲಾವಣೆಗಳನ್ನೂ ತೋರುವುದುಂಟು.

 ಸಾಮಾನ್ಯ ಉಷ್ಣತೆಯಿಂದ ಉಂಟಾಗುವ ಕಾಯಂತರೀಕರಣದ ನಿಕ್ಷೇಪಗಳು ಬಲುಮಟ್ಟಿಗೆ ಸುಲಭವಾಗಿ ಕರಗುವಂಥ ಸುಣ್ಣಶಿಲೆ ಮುಂತಾದವುಗಳಿಗೆ ಸಂಬಂಧಿಸಿವೆ. ಈ ಶಿಲೆಗಳು ಕಬ್ಬಿಣ ಮತ್ತು ಮ್ಯಾಂಗನೀಸ್ ಅದುರುಗಳ ಪರಮಾಣುಗಳ ಕಾಯಾಂತರೀಕರಣಕ್ಕೊಳಗಾಗಿ ಉತ್ತಮ ನಿಕ್ಷೇಪಗಳನ್ನು ಉಂಟುಮಾಡುತ್ತವೆ. ಹೀಗೆಯೇ ಫಾಸ್ಫೇಟ್ (ರಂಜಕವಿರುವ) ನಿಕ್ಷೇಪಗಳೂ ಉಂಟಾಗುತ್ತವೆ. ಕೆಲವು ಪ್ರದೇಶಗಳಲ್ಲಿ ಸುಣ್ಣಶಿಲಪ್ರಸ್ತರಗಳ ಬಹುಭಾಗ ಸ್ಮಿತ್‍ಸೊನೈಟ್ ಮತ್ತು ಮ್ಯಾಲಕೈಟ್-ಅಜûುರೈಟ್ ಖನಿಜಗಳಿಂದ ಕೂಡಿದ ಉತ್ತಮ ದರ್ಜೆಯ ತವರ ಮತ್ತು ತಾಮ್ರದ ಅದುರುಗಳ ನಿಕ್ಷೇಪಗಳಾಗಿ ಮಾರ್ಪಟ್ಟಿವೆ. ಇದೇ ರೀತಿ ಶುದ್ಧರೂಪದ (ನೇಟಿವ್) ತಾಮ್ರ ಮತ್ತು ಬೆಳ್ಳಿ ಮತ್ತು ಈ ಲೋಹಗಳ ಅದುರುಗಳಾದ ಆರ್ಜಂಟೈಟ್, ಚಾಲ್ಕೊಸೈಟ್, ಕೋವಿಲೈಟ್, ಮಾರ್ಕಸೈಟ್‍ಗಳ ನಿಕ್ಷೇಪಗಳೂ ಉಂಟಾಗಿವೆ. ಹೆಚ್ಚಿನ ಉಷ್ಣತೆ ಇರುವ ಸನ್ನಿವೇಶದಲ್ಲಿ ಕಾಯಾಂತರೀಕರಣ ತೀವ್ರಗತಿಯಲ್ಲಿ ನಡೆದು ಉತ್ತಮ ದರ್ಜೆಯ ಖನಿಜನಿಕ್ಷೇಪಗಳುಂಟಾಗಿವೆ. ಈ ವರ್ಗದಲ್ಲಿ ಬಹುಮಟ್ಟಿಗೆ ಸಲ್ಫೈಡುಗಳು, ಗಂಧಕವಿರುವ ಲವಣಗಳು ಸ್ವಲ್ಪ ಪ್ರಮಾಣದಲ್ಲಿ ತವರ, ಟಂಗ್‍ಸ್ಟನ್ ಮತ್ತು ಮ್ಯಾಗ್ನಟೈಟ್ ನಿಕ್ಷೇಪಗಳು ತಲೆದೋರಿವೆ.

 ಕಾಯಾಂತರೀಕರಣಕ್ಕೊಳಗಾಗುವ ಶಿಲೆಗಳು : ಯಾವ ತೆರನಾದ ಶಿಲೆಯಾದರೂ ಕಾಯಾಂತರೀಗರಣದ ಪ್ರಭಾವಕ್ಕೆ ಒಳಗಾಗಬಹುದು. ಆದರೆ ಸುಲಭವಾಗಿ ಕರಗಿ ಹೋಗುವ ಕಾರ್ಬೊನೇಟ್ ಶಿಲೆಗಳು ಕ್ರಿಯೆ ನಡೆಯಲು ಅತ್ಯಂತ ಉತ್ತಮ ಸಹಕಾರಿ. ಸುಣ್ಣದ ಅಂಶವುಳ್ಳ ಜೇಡುಶಿಲೆ ಮತ್ತು ಮರಳುಶಿಲೆಗಳೂ ಈ ಕ್ರಿಯೆಗೆ ಸುಲಭವಾಗಿ ಒಳಗಾಗುತ್ತವೆ. ಇದೇ ರೀತಿ ಅನೇಕ ಅಗ್ನಿಶಿಲೆಗಳಲ್ಲಿ ಅದುರಿನ ನಿಕ್ಷೇಪಗಳೂ ಉಂಟಾಗಿವೆ. ರೂಪಾಂತರ ಶಿಲೆಗಳಲ್ಲಿ ಪದರುಶಿಲೆಗಳಲ್ಲಿ ಪದರುಶಿಲೆ ಮತ್ತು ಅಮೃತಶಿಲೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲೂ ನೈಸ್, ಫಿಲ್ಲ್ಮೆಟ್ ಮತ್ತು ಕ್ವಾಟ್ರ್ಮೈಟುಗಳು ಕಡಿಮೆ ಪ್ರಮಾಣದಲ್ಲೂ ಕಾಯಾಂತರೀಕರಣದ ಪ್ರಭಾವಕ್ಕೆ ಒಳಗಾಗುತ್ತವೆ. ಜೇಡು ಮತ್ತು ಮರಳು ಶಿಲೆಗಳಲ್ಲಿ ಈ ಕ್ರಿಯೆ ಅಷ್ಟಾಗಿ ನಡೆಯುವುದಿಲ್ಲವೆಂದೇ ಹೇಳಬೇಕು.

 ಹಲವು ಅಗ್ನಿಶಿಲೆಗಳಲ್ಲಿ ( ಉದಾ : ಕಣಶಿಲೆಗಳು) ಕಾಯಾಂತರೀಕರಣ ಇಡೀ ಶಿಲೆಯನ್ನು ವ್ಯಾಪಿಸದೆ ಹಲಕೆಲವು ಸ್ಥಳಗಳಲ್ಲಿ ಮಾತ್ರ ತಲೆದೋರುತ್ತದೆ. ಇಲ್ಲಿ ಶಿಲೆಯ ರಚನೆ ಪ್ರಮುಖ ಪಾತ್ರವನ್ನು ವಹಿಸುತ್ತದೆಂಬುದನ್ನು ಮತ್ತೆ ಒತ್ತಿಹೇಳಬೇಕು. ಅದರಲ್ಲೂ ಸೀಳು ಮತ್ತು ಬಿರುಕುಗಳು ಬಹುಮುಖ್ಯ. ಖನಿಜಪೂರಿತ ದ್ರಾವಣಗಳು ಇವುಗಳ ಒಳಹೊಕ್ಕು ಶಿಲೆಯ ದುರ್ಬಲ ಜಾಡುಗಳಲ್ಲಿ ಸಂದರ್ಭಾನುಸಾರ ಪ್ರವಹಿಸಿ ಕಾಯಾಂತರೀಕರಣವನ್ನು ಉಂಟುಮಾಡುತ್ತವೆ. ಹೀಗಾಗಿಯೇ ಓರೆಮಡಿಕೆಗಳು (ಪಿಚ್ಚಿಂಗ್ ಫೋಲ್ಡ್ಸ್) ಅನೇಕ ಸಂದರ್ಭಗಳಲ್ಲಿ ಉತ್ತಮ ದರ್ಜೆಯ ಅದುರಿನ ನಿಕ್ಷೇಪಗಳ ತೌರೂರು.

 ಬೇಟ್‍ಮನ್ ಎಂಬಾತ ಕಾಯಾಂತರೀಕರಣದ ನಿಕ್ಷೇಪಗಳನ್ನು ಮೂರು ಗುಂಪುಗಳನ್ನಾಗಿ ವಿಂಗಡಿಸಿದ್ದಾನೆ. 1 ಸ್ಥೂಲ (ಇರ್ರೆಗ್ಯುಲರ್) ನಿಕ್ಷೇಪಗಳು : ಇವುಗಳಿಗೆ ನಿರ್ದಿಷ್ಟ ರಚನೆಯಾಗಲೀ ಆಕಾರವಾಗಲೀ ಇಲ್ಲ. ಮಂದದಲ್ಲಿ ಹೆಚ್ಚಿನ ರೀತಿಯ ವ್ಯತ್ಯಾಸಗಳು ಕಂಡುಬರುತ್ತವೆ. ಕ್ವಿಬೆಕ್ ದೇಶದ ನೊರಾಂಡ ಪೈರಿಟಿಸ್ ಖನಿಜ ನಿಕ್ಷೇಪಗಳು ಉತ್ತಮ ಉದಾಹರಣೆ. ಹೀಗೆಯೇ ಅಮೆರಿಕದ ಸಂಯುಕ್ತಸಂಸ್ಥಾನದ ಮನಿಟೋಬಾ ಮತ್ತು ಸ್ಪೇನಿನ ರಿಯೊಟಿಂಟೋ ನಿಕ್ಷೇಪಗಳೂ ಈ ಬಗೆಯವು. ರಿಯೊಟಿಂಟೋ ನಿಕ್ಷೇಪದಲ್ಲಿ 500 ಮಿಲಿಯನ್ ಟನ್ನುಗಳಿಗೂ ಹೆಚ್ಚಿನ ಪ್ರಮಾಣದಲ್ಲಿ ಪೈರೈಟ್ ಖನಿಜ ನಾಡಶಿಲೆಯ ಕಾಯಾಂತರೀಕರಣದಿಂದ ಉಂಟಾಗಿದೆ. ಈ ಗುಂಪಿನ ನಿಕ್ಷೇಪಗಳು ಬಹುಮಟ್ಟಿಗೆ ಸುಣ್ಣಶಿಲೆಯಲ್ಲಿ ಕಂಡುಬಂದರೂ ಇತರ ಶಿಲೆಗಳಲ್ಲೂ ಕಾಣಸಿಗುವುದುಂಟು.

 2 ಖನಿಜಸಿರಗಳು : ಇವು ಶಿಲಾಸೀಳುಗಳು ಅಥವಾ ಶಿಲಾಪ್ರಸ್ತರಗಳ ನಡುವೆ ಶೇಖರವಾಗಿರುತ್ತವೆ. ಹೀಗಾಗಿ ಸಣ್ಣಸಣ್ಣ ಎಳೆಗಲೋಪಾದಿಯಲ್ಲಿ ಇವು ಶಿಲೆ ಇಡೀ ಹರಡಿರುವುವು. ಗಾತ್ರದಲ್ಲಿ ಅಷ್ಟು ದೊಡ್ಡವಾಗಿರುವುದಿಲ್ಲ. ಆಂಟೇರಿಯೋವಿನ ಕಿರ್ಕ್‍ಲ್ಯಾಂಡ್ ಲೇಕ್ ಪ್ರದೇಶದ ಚಿನ್ನದ ನಿಕ್ಷೇಪಗಳು, ಅಲಾಸ್ಕಾವಿನ ಕೆನಿಕಾಟ್‍ನ ತಾಮ್ರದ ನಿಕ್ಷೇಪಗಳು ಮತ್ತು ಇಡಾಹೋವಿನ ಕೂರ್‍ಡಿ ಆಲಿನ್‍ನ ಸೀಸದ ನಿಕ್ಷೇಪಗಳು ಈ ಬಗೆಯ ಕಾಯಾಂತರೀಕರಣದ ನಿಕ್ಷೇಪಗಳಿಗೆ ಉತ್ತಮ ನಿದರ್ಶನ.

  3 ಚದರಿರುವ ನಿಕ್ಷೇಪಗಳು : ಇವುಗಳಲ್ಲಿ ಕಾಯಾಂತರೀಕರಣ ಖನಿಜ ಅಷ್ಟು ಹೆಚ್ಚಿನ ಪ್ರಮಾಣದಲ್ಲಿರುವುದಿಲ್ಲ. ಇಡೀ ನಾಡಶಿಲೆಯಲ್ಲಿ ಸಣ್ಣ ಕಣಗಳೋಪಾದಿಯಲ್ಲಿ ಚದುರಿ ಹೋಗಿರುತ್ತವೆ. ಖನಿಜ ಪ್ರಮಾಣ ಶಿಲೆಯೊಡನೆ ಹೋಲಿಸುವುದಾದರೆ ಅತ್ಯಲ್ಪ. ನೂರು ಭಾಗಗಳಿಗೆ ಕೇವಲ ಎರಡರಿಂದ ಹಿಡಿದು ಹತ್ತರವರೆಗೆ ಕಂಡುಬರುತ್ತದೆ. ಅಲ್ಲದೆ ಅದುರು ಸಹ ಸಾಮಾನ್ಯವಾಗಿ ಅಷ್ಟು ಉತ್ತಮ ದರ್ಜೆಯದಲ್ಲ. ಈ ಬಗೆಯ ನಿಕ್ಷೇಪಗಳಲ್ಲಿ ಖನಿಜವನ್ನು ಒಪ್ಪ ಮಾಡುವುದು ಅಷ್ಟು ಸುಲಭವಲ್ಲ. ಶ್ರಮಸಾಧ್ಯವಾದ ಗಣಿಯ ಕೆಲಸ ನಡೆಯಬೇಕು. ಚಿಲಿದೇಶದ ಚುಕ್ಕಿ ಕಮಾಟಾ ತಾಮ್ರದ ಗಣಿಗಳು ಅತ್ಯುತ್ತಮ ಉದಾಹರಣೆ. ಇಲ್ಲಿ ಕೇವಲ 1.64% ರಷ್ಟು ಪ್ರಮಾಣದಲ್ಲಿ 1,035 ಮಿಲಿಯನ್ ಟನ್ನುಗಳಷ್ಟು ತಾಮ್ರದ ಅದುರು ಇರುವುದೆಂದು ಅಂದಾಜು ಮಾಡಲಾಗಿದೆ. ಊಟಾ ಪ್ರದೇಶದ ತಾಮ್ರದ ನಿಕ್ಷೇಪಗಳು ಸಹ ಈ ಬಗೆಯವು.

 ಕಾಯಾಂತರೀಕರಣ ನಿಕ್ಷೇಪಗಳ ಅಕಾರ ಮತ್ತು ಗಾತ್ರ : ಈ ಬಗೆಯ ಖನಿಜ ನಿಕ್ಷೇಪಗಳ ಆಕಾರ ಬಲುಮಟ್ಟಿಗೆ ಮಾತೃಶಿಲೆಗಳ ಲಕ್ಷಣಗಳನ್ನೂ ಅಲ್ಲಿ ತಲೆದೋರಿದ ಭೂಚಟುವಟಿಕೆಗಳನ್ನೂ ಅವಲಂಬಿಸಿದೆ. ಸಾಮಾನ್ಯವಾಗಿ ಇವುಗಳಿಗೆ ನಿರ್ದಿಷ್ಟ ಆಕಾರವೇ ಇರುವುದಿಲ್ಲ. ಆದರೆ ಹಲವು ಬಾರಿ ಹಾಳೆಯಂತೆ ಚಪ್ಪಟೆಯಾಗಿರುವುದುಂಟು. ಹಲವು ಬಾರಿ ಉದ್ದನೆಯ ಕೊಳವೆಯಂತೆ ಅಥವಾ ಗೋಪುರ ಇಲ್ಲವೇ ಬಾಣಲೆಯಂತೆಯೂ ಕಂಡು ಬರುತ್ತವೆ. ಗಾತ್ರದಲ್ಲಿ ಹೆಚ್ಚಿನ ಏರುಪೇರುಗಳನ್ನು ಕಾಣಬಹುದು. ಹಲವು ಸಣ್ಣಪುಟ್ಟ ಬಿರುಕುಗಲೋಪಾದಿಯಲ್ಲಿದ್ದರೆ ಕೆಲವು ನೂರಾರು ಅಡಿಗಳಿಗೂ ಮೀರಿದ ಬೃಹದಾಕಾರವನ್ನು ತಳೆದಿರುತ್ತವೆ. ಇವುಗಳಲ್ಲಿ ಬಹುಮುಖ್ಯವಾದುದು ಅಮೆರಿಕದ ಕಾಲೊರಾಡೋವಿನ ಲೆಡ್‍ವಿಲ್ ಬಳಿಯ ಸತುವಿನ ನಿಕ್ಷೇಪ. ಇದರ ಉದ್ದ 3,500, ಅಗಲ 1,600 ಮತ್ತು ಮಂದ ಸುಮಾರು 200'.

 ಕಾಯಾಂತರೀಕರಣದಿಂದ ಉಂಟಾದ ಕಬ್ಬಿಣ, ತಾಮ್ರ, ಸೀಸ, ಸತು, ಚಿನ್ನ, ಬೆಳ್ಳಿ, ತವರ, ಮ್ಯಾಂಗನಿಸ್, ಒರೈಟ್, ಪ್ಲೂರೈಟ್ ಮತ್ತು ಮ್ಯಾಗ್ನಸೈಟ್ ಮೊದಲಾದ ಉಪಯುಕ್ತವಾದ ಖನಿಜಗಳ ನಿಕ್ಷೇಪಗಳನ್ನು ಪ್ರಪಂಚದ ಹಲವಾರು ಕಡೆ ನೋಡಬಹುದು.

 (ಬಿ.ವಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ